ಭಾರತ ಮಾತೆಯನ್ನು ಮಾರಾಟ ಮಾಡಿದ್ದೀರಿ ಎಂದ ರಾಹುಲ್ ಗಾಂಧಿ: ರಾಹುಲ್ ಭಾಷಣಕ್ಕೆ ಬಿಜೆಪಿ ಆಕ್ಷೇಪ

Feb 12, 2026 - 09:44
 0  0
ಭಾರತ ಮಾತೆಯನ್ನು ಮಾರಾಟ ಮಾಡಿದ್ದೀರಿ ಎಂದ ರಾಹುಲ್ ಗಾಂಧಿ: ರಾಹುಲ್ ಭಾಷಣಕ್ಕೆ ಬಿಜೆಪಿ ಆಕ್ಷೇಪ


ಕಳೆದ ಮೂರ್ನಾಲ್ಕು ವಾರಗಳಿಂದ ಭಾರೀ ಗದ್ದಲ-ಗಲಾಟೆಗೆ ಸಾಕ್ಷಿಯಾಗಿದ್ದ ಲೋಕಸಭೆಯಲ್ಲಿ ಇಂದು ಕೊನೆಗೂ ರಾಹುಲ್ ಗಾಂಧಿಗೆ ಮಾತನಾಡಲು ಅವಕಾಶ ಸಿಕ್ತು. ಇದನ್ನು ಭರ್ಜರಿಯಾಗೇ ಬಳಸಿಕೊಂಡ ರಾಗಾ, ಅಮೆರಿಕದ ಜೊತೆಗಿನ ಒಪ್ಪಂದ ಪ್ರಶ್ನಿಸಿ ಅಕ್ಷರಶಃ ಕೇಂದ್ರದ ವಿರುದ್ಧ ಮುಗಿಬಿದ್ದರು. ಭಾರತ ಮಾತೆಯನ್ನು ಮಾರಿದ್ದೀರಿ ಅಂತೆಲ್ಲ ಗುಡುಗಿದ್ದಾರೆ. ಆದ್ರೆ ನಿರಾಧಾರ ಆರೋಪ ಅಂತ ಹಕ್ಕುಚ್ಯುತಿ ಸಂಕಷ್ಟ ಎದುರಾಗಿದೆ.
ಗದ್ದಲ-ಗಲಾಟೆ.. ಡ್ರಾಮಾ ಅಲ್ಲ ಹೈಡ್ರಾಮಾ.. ಇದು ಸುಮಾರು 20 ದಿನಗಳಿಂದ ಲೋಕಸಭೆಯಲ್ಲಿ ಕಂಡುಬರುತ್ತಿರುವ ದೃಶ್ಯ.. ನರವಣೆ ಪುಸ್ತಕ ಪ್ರಸ್ತಾಪಿಸಿ ಗಲ್ವಾನ್‌ ಘರ್ಷಣೆ ವಿಚಾರ ಪ್ರಸ್ತಾಪಿಸಲು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮುಂದಾಗಿದ್ದರು. ಆದ್ರೆ ಆ ಪುಸ್ತಕ ಪ್ರಕಟವಾಗದ ಕಾರಣ ಸ್ಪೀಕರ್‌ ಓಂ ಬಿರ್ಲಾ ಅವಕಾಶ ನಿರಾಕರಿಸಿದ್ದರು. ಇದು ಆಡಳಿತ ವರ್ಸಸ್​ ವಿಪಕ್ಷ ಸದಸ್ಯರ ನಡುವೆ ವಾಗ್ಯುದ್ಧಕ್ಕೆ ರಣವೀಳ್ಯ ಕೊಟ್ಟಿತ್ತು. ರಾಹುಲ್​ಗೆ ಮಾತನಾಡಲು ಅವಕಾಶ ಬೇಕೆಂದು ಪ್ರತಿಭಟನೆ ಮಾಡಿ ಕಾಗದ ಎಸೆದ 8 ಸಂಸದರ ಅಮಾನತು ಪ್ರಹಸನ ಕೂಡ ನಡೆಯಿತು. ಇಷ್ಟೆಲ್ಲಾ ರಾದ್ಧಾಂತಗಳ ಬೆನ್ನಲ್ಲೇ ರಾಹುಲ್ ಗಾಂಧಿಗೆ ಲೋಕಸಭೆಯಲ್ಲಿ ಮಾತನಾಡಲು ಕೊನೆಗೂ ಸ್ಪೀಕರ್ ಅವಕಾಶ ಕೊಟ್ಟಿದ್ದಾರೆ.

‘ಭಾರತ ಮಾತೆಯನ್ನು ಮಾರಾಟ ಮಾಡಿದ್ದೀರಿ’
ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದಕ್ಕೆ ರಾಹುಲ್ ಕೆಂಡ
ಇಂದು ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಮಾತನಾಡಿದ ರಾಹುಲ್‌ ಗಾಂಧಿ ಅಕ್ಷರಶಃ ಕೇಂದ್ರದ ವಿರುದ್ಧ ಕೆಂಡವಾಗಿದ್ರು. ಬಜೆಟ್‌ನಲ್ಲಿ ಎಐನಿಂದ ಉದ್ಭವಿಸಿರುವ ಉದ್ಯೋಗ ಸಮಸ್ಯೆಯನ್ನ ಪ್ರಸ್ತಾಪಿಸಿಲ್ಲ. ಅಲ್ಲದೇ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಟೀಕಾ ಪ್ರಹಾರ ನಡೆಸಿದ್ರು. ಮುಂದುವರೆದ ಅವರ ವಾಗ್ಬಾಣಗಳು, ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದದ ಮೇಲೂ ದಾಳಿ ಮಾಡಿದವು. ಭಾರತ ಯಾರಿಂದ ತೈಲ ಖರೀದಿಸಬೇಕು ಅಂತ ಅಮೆರಿಕ ನಿರ್ಧರಿಸುತ್ತಿದೆ. ಈ ವ್ಯಾಪಾರ ಒಪ್ಪಂದದ ಮೂಲಕ ಭಾರತ ಮಾತೆಯನ್ನು ಮಾರಾಟ ಮಾಡಿದ್ದೀರಿ. ನಿಮಗೆ ನಾಚಿಕೆ ಇಲ್ಲ. ಈ ಒಪ್ಪಂದವು ಸಂಪೂರ್ಣ ಶರಣಾಗತಿ. ರೈತರ ಹಿತಾಸಕ್ತಿಗಳನ್ನು ರಾಜಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ರು. 

ಮುಂದುವರೆದು ಮಾತನಾಡಿದ ರಾಹುಲ್, ಪ್ರಧಾನಿ ಮೋದಿ ಟ್ರಂಪ್‌ಗೆ ಶರಣಾಗಿಬಿಟ್ಟಿದ್ದಾರೆ. ಟ್ರಂಪ್‌ ಜೊತೆ ಸೇವಕರಂತೆ ಮಾತಾಡದೇ ಸರಿ ಸಮಾನರಂತೆ ಮಾತನಾಡಿ ಎಂದಿದ್ದಾರೆ. ಅಲ್ಲದೇ ನಾವು ಮತ್ತು ಪಾಕಿಸ್ತಾನ ಸರಿ ಸಮಾನವಲ್ಲ. ಭಾರತ ಅಪಾರ ಡಾಟಾವನ್ನ ಹೊಂದಿದೆ. ನಮ್ಮ ಭಾರತದ ಜನಸಂಖ್ಯೆಯೇ ಬಲು ದೊಡ್ಡ ಡಾಟಾ. ಇದುವೇ ಎಐ ಯುಗಕ್ಕೆ ಬಲುದೊಡ್ಡ ಸಂಪನ್ಮೂಲ. ಆದರೆ ನಮ್ಮ ಡಾಟಾವನ್ನ ಸರ್ಕಾರ ಉಚಿತವಾಗಿ ಅಮೆರಿಕಕ್ಕೆ ಅಪ್‌ಲೋಡ್‌ ಮಾಡ್ತಿದೆ ಅಂತಾನೂ ಸಿಡಿಗುಂಡು ಎಸೆದ್ರು. ವ್ಯಾಪಾರ ಡೀಲ್‌ನಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದು ನಾವು ಅಮೆರಿಕದ ಮುಂದೆ ಮೂರ್ಖರಾಗಿದ್ದೇವೆ ಅಂತ ಗರಂ ಆದ್ರು.
ಇನ್ನು ಇಷ್ಟೆಲ್ಲ ಆರೋಪ ಮಾಡ್ತಿದ್ದಂತೆ ಕೇಂದ್ರ ಸರ್ಕಾರ ರಾಹುಲ್​ ಗಾಂಧಿ ವಿರುದ್ಧ ಹಕ್ಕು ಚ್ಯುತಿ ಮಂಡಿಸಲು ಮುಂದಾಗಿದೆ. ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಕ್ಕೆ, ಆಧಾರರಹಿತ ಆರೋಪ ಮಾಡಿದ್ದಕ್ಕೆ ರಾಹುಲ್ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗುವುದು ಅಂತ ಕೇಂದ್ರ ಸಚಿವ ಕಿರಣ್​ ರಿಜಿಜು ಹೇಳಿದ್ದಾರೆ. ಭಾರತವನ್ನು ಯಾರೂ ಮಾರಲು ಸಾಧ್ಯವಿಲ್ಲ ಎಂದಿದ್ದಾರೆ

ಒಟ್ಟಾರೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಇಂದು ಅಕ್ಷರಶಃ ಕೆಂಡವಾಗಿದ್ರು. ಮೊದಲೇ ಮಾತನಾಡಲು ಅವಕಾಶ ಸಿಗದೇ ವಂಚಿತರಾಗಿದ್ದ ಅವರು ಇಂದು ಸಿಕ್ಕ ಅವಕಾಶವನ್ನು ಭರ್ಜರಿಯಾಗೇ ಬಳಸಿಕೊಂಡ್ರು. ಆದ್ರೆ ರಾಹುಲ್ ನಿರಾಧಾರ ಆರೋಪ ಮಾಡಿದ್ದಾರೆಂದು ಕೇಂದ್ರ ಹಕ್ಕುಚ್ಯುತಿ ಮಂಡಿಸಲು ಮುಂದಾಗಿದ್ದು ಸಂಕಷ್ಟ ಎದುರಾಗಲಿದೆ.

ನ್ಯೂಸ್​ ಫಸ್ಟ್​ ಬ್ಯೂರೋ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0